ಶ್ರೀ ರಾಮ ತ್ರೇತಾಯುಗದ ಮಹಾಪುರುಷನಾದರೆ, ಶ್ರೀ ಕೃಷ್ಣ ದ್ವಾಪರಯುಗದ ಮಾಹಾಪುರುಷ ಎಂದು ಪುರಾಣ ಪುಣ್ಯ ಕಥೆಗಳು ಪರಿಗಣಿಸಿವೆ. ಈ ಲೇಖನದಲ್ಲಿ ನಾನು ಕಂಡ ವ್ಯತ್ಯಾಸಗಳನ್ನು ಹಾಗು ನನ್ನ ಕೆಲವು ಕುತೂಹಲ ಪ್ರಶ್ನೆಗಳನ್ನು ಕೇಳುತ್ತಾ ಬರೆಯುತ್ತಿದ್ದೇನೆ. ಈ ಎರಡೂ ರೂಪಗಳನ್ನು ಏಕವಚನದಲ್ಲಿ ಉದ್ದೇಶಿಸಿದ್ದೇನೆ ಎಂದು ತಪ್ಪು ತಳಿಯಬಾರದು. ಇವರಿಬ್ಬರ ವ್ಯಕ್ತಿತ್ವ ಬಹಳ ಭಿನ್ನವಾಗಿದೆ ಹಾಗು ಕೆಲವೊಂದುಕಡೆ ಚಿಂತನೆಯಲ್ಲಿ ಸಮವೆಂದು ಕಂಡುಬರುತ್ತದೆ ನಾನು ಅದನ್ನು ಗೌರವದಿಂದ ಕಂಡಿದ್ದೇನೆ.
ಶ್ರೀ ರಾಮ ಏಕಪತ್ನಿತ್ವದಲ್ಲಿ ನಂಬಿಕೆ ಇಟ್ಟವನಾದರೆ, ಶ್ರೀ ಕೃಷ್ಣ ಬಹುಪತ್ನಿತ್ವದಲ್ಲಿ ಭಾಗಿಯಾದವನು ಬೆಂಬಲಿಸಿದವನು ಕೂಡ. ಶ್ರೀ ಕೃಷ್ಣ ತನ್ನ ತಂಗಿಯಾದ ಸುಭದ್ರೆಯನ್ನು ಅರ್ಜುನ ಮೊದಲೇ ಮಧುವೆ ಮಾಡಿಕೊಂಡಿದ್ದನೆಂದು ತಿಳಿದಿದ್ದರೂ ಅವಳನ್ನು ಅರ್ಜುನನಿಗೆ ಮಧುವೆಮಾಡಿ ಕೊಡುತ್ತಾನೆ. ಶ್ರೀ ರಾಮ ರಾಜಕೀಯ ಪ್ರಲಾಪಗಳಲ್ಲಿ ತನ್ನ ಸಮಯ ಕಳೆದಿರುವುದು ಬಹಳ ಕಡಿಮೆ ಎಂದು ಕಂಡುಬರುತ್ತದೆ (ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸುವ ಸಂಧರ್ಭದಲ್ಲಿ ಪ್ರಜೆಗಳ ಮಾತಿಗೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಧಾರ ಹೊರತು ಪಡಿಸಿ) ಆದರೆ ಶ್ರೀ ಕೃಷ್ಣ ತನ್ನ ರಾಜತಾಂತ್ರಿಕ ಬುದ್ದಿಯಿಂದ ತನ್ನ ಜೀವನದನ ಮುಖ್ಯ ದಿನಗಳಲ್ಲಿ ರಾಜಕೀಯಕ್ಕೆ ತೊಡಗಿಕೊಂಡಿರುತ್ತಾನೆ.
ಶ್ರೀ ರಾಮ ಅನುಭವಿಸಿರುವ ಕಷ್ಟಗಳನ್ನು ಶ್ರೀ ಕೃಷ್ಣ ಅಷ್ಟಾಗಿ ಅನುಭವಿಸಿಲ್ಲವೆಂದು ಪುರಾಣಗಳ ಮೂಲಕ ತಿಳಿಯುತ್ತವೆ. ಇವರಿಬ್ಬರೂ ಒಂದೇ ಕಾಲಘಟ್ಟದಲ್ಲಿ ಇರಲಿಲ್ಲವಾದ್ದರಿಂದ ಕಷ್ಟ-ಸುಖಗಳ ಹೋಲಿಕೆ ಸರಿಹೊಂದುವುದಿಲ್ಲ ಎಂದು ನನ್ನ ನಂಬಿಕೆ ಆದರೂ ಪರಿಸರ, ವಾತಾವರಣ ತಮಗೆ ಸಿಕ್ಕಿದ್ದ ಅಧಿಕಾರದ ಬಳಕೆಯ ಆಧಾರ ಚೌಕಟ್ಟಿನಲ್ಲಿ ನೋಡಿ ಹೋಲಿಕೆ ಮಾಡುತ್ತಿದ್ದೇನೆ. ಶ್ರೀ ರಾಮ ಮೂಲತಃ ರಘುವಂಶದ ಕ್ಷತ್ರಿಯ, ಶ್ರೀ ಕೃಷ್ಣ ಯಾದವ (ಗೊಲ್ಲ) ಸಮಾಜದಲ್ಲಿ ಹುಟ್ಟಿದವನು.
ಶ್ರೀ ರಾಮ ಬೋಧನೆಯ ಹಾದಿ ಹಿಡಿಯಲಿಲ್ಲ ಆದರೆ ಶ್ರೀ ಕೃಷ್ಣ ಬಹಳಷ್ಟು ಕಾಲ ರಾಜಕೀಯ ಬೋಧನೆ ಹಾಗು ಪ್ರಾಪಂಚಿಕ ಬೋಧನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು ಎಂದು ಪುರಾಣಗಳಿಂದ ಕಾಣುತ್ತದೆ. ಶ್ರೀ ರಾಮ ತನ್ನ ಗುರಿಯನ್ನು ಮುಟ್ಟಲು ಸಂಘರ್ಷಿಸುತ್ತ ಅಲೆದಾಡುತ್ತಾ ಬಹಳ ಜಾಗಗಳನ್ನು ನೋಡುತ್ತಾ, ಜನರನ್ನು ಕಾಣುತ್ತಾ ಸೇತುವೆಗಳನ್ನು ಕಟ್ಟುತ್ತಾ ಕಾಲೋಪಯೋಗವನ್ನು ಮಾಡಿದ್ದಾದರೇ ಶ್ರೀ ಕೃಷ್ಣ ತನ್ನ ರಾಜಾತಾಂತ್ರಿಕ ಮಾರ್ಗವನ್ನು ಹಿಡಿದು ಪಾಂಡವರನ್ನು ತಲುಪುತ್ತಾನೆ ಇಲ್ಲಿಂದ ಶ್ರೀ ಕೃಷ್ಣನ ನೀತಿಗಳು ಜನರನ್ನು ಮುಟ್ಟಲು ಶುರುವಾಗುತ್ತದೆ.
ಹನುಮ ಒಬ್ಬ ಅಡವಿವಾಸಿ ಆದರೂ ಅವನು ಶ್ರೀ ರಾಮನಿಗೆ ಹತ್ತಿರವಾಗಿರುತ್ತಾನೆ ಹಾಗೆಯೇ ಶ್ರೀ ಕೃಷ್ಣ ಒಬ್ಬ ಯಾದವ ಗೊಲ್ಲನಾದರೂ ಕ್ಷತ್ರಿಯರಾದ ಪಾಂಡವರಿಗೆ ಹತ್ತಿರವಾಗಿರುತ್ತಾನೆ. ಅಂದರೆ ಜಾತಿ ಇಲ್ಲಿ ಬರುವುದಿಲ್ಲವೆಂದು ಸ್ಪಷ್ಟವಾದಂತಿದೆ. ಶ್ರೀ ರಾಮ ಹನುಮಂತನ ಒಡೆಯನಾಗಿ ಕಾಣುತ್ತಾನೆ, ಆದರೆ ಶ್ರೀ ಕೃಷ್ಣ ಯಾರಿಗೂ ಒಡೆಯನೆಂದು ಚಿತ್ರಿಸಿಲ್ಲವೆಂದು ನನ್ನ ನಂಬಿಕೆ. ಸುಧಾಮ ಶ್ರೀ ಕೃಷ್ಣನ ಬಾಲ್ಯದ ಗೆಳೆಯನಾದರೂ ಅವನ್ನನ್ನು ಮಿತ್ರನಂತೆ ಮಾತ್ರ ಕಾಣುತ್ತಾನೆ.
ಒಟ್ಟಿನಲ್ಲಿ ಶ್ರೀ ರಾಮ ಹಾಗು ಶ್ರೀ ಕೃಷ್ಣ ಇಬ್ಬರು ಪುರಾಣದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ ಅಂತೆಯೇ ಜನರಿಗೆ ತಮ್ಮ ದಿನ ನಿತ್ಯದ ಬದುಕಿನಲ್ಲಿ ಮಾದರಿಯಾಗಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಶ್ರೀ ಕೃಷ್ಣ, ಶ್ರೀ ರಾಮನ ಅವತಾರವೆಂದು ಹೇಳಿದರೂ ಜಾತಿಯ ಬಗೆಗಿನ ಉದಾರತೆ ಕಾಣಬಹುದು. ದ್ವಾಪರ ಯುಗದ ಶ್ರೀ ಕೃಷ್ಣ, ಕ್ಷತ್ರಿಯ ಜಾತಿಯ ರಾಮನ ಅವತಾರವೆಂದು ಹೇಳುವುದು ಉದಾರತೆಯನ್ನು ಮತ್ತು ಸೃಷ್ಟಿಯ ಜಾತ್ಯತೀತ ಸೊಬಗನ್ನು ಹೇಳುತ್ತದೆಯಲ್ಲವೇ?
ಈ ಇಬ್ಬರು ಪಾತ್ರಗಳಲ್ಲಿ ಇವರಿಂದ ನಡೆದಿರುವ ಲೋಕ ಕಲ್ಯಾಣ ಹೇಗೆ ಕಾಣುತ್ತದೆ ಎಂದು ನಿಮ್ಮ ವಿಚಾರಕ್ಕೆ ಬಿಡುತ್ತೇನೆ.