ಪ್ರಧಾನ ಮಂತ್ರಿ ದೇವರ ಸಮಾನರೇ?

ಈಗಿನ ದಿನಗಳಲ್ಲಿ ಜೀವನಕ್ಕಿಂತ ದೊಡ್ಡದು (larger than life) ಎಂದು ತೋರಿಸುವ ಮಾಧ್ಯಮಗಳು ಹುಟ್ಟಿಕೊಂಡಿವೆ ಎಂದರೇ ತಪ್ಪಾಗುವುದೇ ?

ಯಾವ ಮಾಧ್ಯಮಗಳನ್ನು ನೋಡಿದರೂ ಪ್ರಧಾನಮಂತ್ರಿ ಮೋದಿಯ ಬಗ್ಗೆ ಹೊಗಳಿಕೆ, ಪ್ರಧಾನಮಂತ್ರಿಯ ವಿಷಯ ಅವರ ವೇಷ ಭೂಷಣ, ದೊಡ್ಡ ದೊಡ್ಡ ಭಾಷಣ, ದೇಶದ ಗಡಿಯನ್ನು ಕಾಯುತ್ತಿರುವ ಯೋಧರ ಮಧ್ಯೆ ನಿಂತು ಚಿತ್ರ ತೆಗಿಸಿಕೊಳ್ಳುವುದು, ಯಾವುದಾದರೊಂದು ಹಿಂದೂ ಮಂದಿರಗಳಿಗೆ ಹೋಗಿ ಗರ್ಭಗುಡಿಯಿಂದ ಫೋಟೋ ತೆಗೆಸಿಕೊಳ್ಳುವುದು, ಯಾವುದೇ ಹೊಸ ಉದ್ಘಾಟನೆಯಲ್ಲಿ ತನ್ನ ಬಗ್ಗೆ ತಾನೇ ಹೊಗಳಿಕೊಂಡು ತನ್ನನು ತನ್ನ ಸರಕಾರವನ್ನು ಜನರು ಕಟ್ಟಿರುವ ಮಾರುಕಟ್ಟೆಯಲ್ಲಿ ಮಾರಿಕೊಳ್ಳುವುದು.  ಏನು ನಡೆಯುತ್ತಿದೆ ಈ ದೇಶದಲ್ಲಿ ?

ಏಕೆ ಈಮಾತನ್ನು ಹೇಳುತ್ತಿದ್ದೇನೆ ಎಂದರೆ ನರೆಂದ್ರ ಮೋದಿಯವರನ್ನು ಜೀವನಕ್ಕಿಂತ ದೊಡ್ಡದಾಗಿ ತೋರಿಸುತ್ತಿರುವ ಈ ದಿನಗಳಲ್ಲಿ ನಾನು ನೋಡಿದ ಕೆಲವು ಮನೆಗಳಲ್ಲಿ ಅವರನ್ನು ಶಿವನ ಅವತಾರವೆಂದು ಹೇಳುತ್ತಿದ್ದರು.  ಇದನ್ನು ಕೇಳಿ ನಾನು ನಿಜವಾಗಿಯೂ ಪ್ರಶ್ನೆ ಮಾಡಿಕೊಂಡು ಈ ಬರಹವನ್ನು ಬರೆಯುತ್ತಿದ್ದೇನೆ.  ವ್ಯಕ್ತಿ ಪೂಜೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಒಬ್ಬ ಸಾಮಾನ್ಯ ಮನುಷನನ್ನು ಶಿವನ ಅವತಾರವೆಂದು ಹೇಗೆ ಹೇಳುತ್ತಾರೆ ? ದಿಕ್ಕುಗಳನ್ನೇ ಅಂಬರವಾಗಿಸಿ, ಚರ್ಮವನ್ನು ಸೊಂಟಕ್ಕೆ ಕಟ್ಟಿಕೊಂಡಿರುವ ಶಿವನೆಲ್ಲಿ ಈ ಪ್ರದಾನ ಮಂತ್ರಿಯೆಲ್ಲಿ? ಕೆಲವರಂತೂ ಮೋದಿಯನ್ನು ಅವತಾರ ಪುರುಷವೆಂದು ಕರೆಯಲು ಆರಂಭಿಸಿದ್ದಾರೆ.  ಜಗತ್ತಿಗೆ ಪ್ರಜಾಪಭುತ್ವ ಏನೆಂದು ತ್ರೇತಾಯುಗದಲ್ಲಿ ಶ್ರೀ ರಾಮ ತೋರಿಸಿದ ಈ ನಾಡಿನಲ್ಲಿ, ಪ್ರಜಾಪ್ರಭುತ್ವವನ್ನು ತನ್ನ ಅಸ್ತ್ರವನ್ನಾಗಿಸಿ ಸರ್ವಾಧಿಕಾರವನ್ನು ಅನುಭವಿಸುತ್ತಿರುವ ನಮ್ಮ ಪ್ರಧಾನ ಸೇವಕರು ಶಿವನ ಸಮಾನವೇ ? ಶಿವನ್ನನ್ನೇ ನೋಡಿ ಬಂದವರಹಾಗೆ ಜನ ನಮ್ಮ ಪ್ರಧಾನ ಮಂತ್ರಿಯನ್ನು ಶಿವನಿಗೆ ಹೋಲಿಕೆ ಮಾಡುತ್ತಿದ್ದಾರೆ ಎನ್ನುವುದು ಪ್ರಶ್ನೆ ಮಾಡುವ ವಿಚಾರವೇ ಆಗಿದೆ. 

 ಶೋಷಿತ ವರ್ಗದ ನಡುವೆ ಬಂದು ನಿಂತು ಒಮ್ಮೆಯಾದರೂ ಮಾತಾಡಿದ್ದಾರಾ ಇವರು? ಇಲ್ಲ! ತಾವು ಇರುವ ಜಾಗಕ್ಕೆ ಜನರನ್ನು ಕರೆದುತಂದು ತಾವು ಹೇಳುವುದನ್ನು ಕೇಳಬೇಕೆಂದು (ಹಣಕೊಟ್ಟು) ಜನರನ್ನು ಕರೆದುಕೊಂಡು ಬಂದು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ.  ತರ್ಕಕ್ಕೆ  (logic ) ಬೆಲೆ ಇಲ್ಲವೇ ?, ತರ್ಕಮಾಡುವರಾರು ನಶಿಸಿ ಹೋಗಿದ್ದಾರೆಯೇ ?.  ನಮಗೆ ಯಾವರೀತಿಯ ನಾಯಕರು ಬೇಕಾಗಿದ್ದಾರೆ? ಅದನ್ನು ಹೇಗೆ ಹೇಳಬೇಕು? 

ಧರ್ಮ, ಜಾತಿ, ಮತ, ಪಂಥ, ಭಾಷೆ, ನೆಲ ಮೀರಿದ ತಿಳುವಳಿಕೆ ಇರುವವನ ಸಹಾಯ ಬೇಕಾಗಿದೆ.  ದೇಶ ಯಾವುದೇ ಒಂದು ವರ್ಗಕ್ಕೆ ಸೇರಿದ ಸ್ವತ್ತಲ್ಲ! ಮಾನವ ಜಾತಿ ತಿಳಿದರೆ ನಾವು ವಾಸಮಾಡುತ್ತಿರುವ ನೆಲ, ನೆಲೆ, ನೀರು, ಗಾಳಿ, ಆಹಾರ ಇತ್ಯಾದಿಗಳನ್ನು ಮೀರಿ ಬೆಳೆಯಬೇಕು.  

ಮನುಷ್ಯ ತನ್ನ ಸೃಜನಶೀಲತೆಯನ್ನು  (creativity) ಎಲ್ಲ ವಿಭಾಗಗಳಲ್ಲಿಯೂ ತೋರಿಸಬಹುದಾಗಿದೆ.  ಛಾಯಾಗ್ರಹಣ, ಕಥೆಗಳು, ಕಾವ್ಯಗಳು, ಚಲನ ಚಿತ್ರ, ತಂತ್ರಜ್ಞಾನ, ಶಿಕ್ಷಣ, ಆಹಾರ, ಆಟೋಟ, ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಗಾಯನ, ನೃತ್ಯ, ವ್ಯಾಪಾರ ಹೀಗೆ ಹತ್ತು ಹಲವು. ಇತರರು ಸಾದಿಸಿರುವರರ ಹಾಗು ನನ್ನ ಅನುಭವದಲ್ಲಿ ನೋಡಿರುವ ಎಲ್ಲ ಸೃಜನಶೀಲತೆಯ ಕೆಲಸವನ್ನು ಕಲೆಹಾಕಿ ನೋಡಿದಾಗ ತಿಳಿಯುವುದು ಏನೆಂದರೆ ಇಲ್ಲಿ ಯಾವುದೂ ಸುಲಭವಾಗಿ ಸಿಗುವಂಥದ್ದಲ್ಲ,ಎಲ್ಲವನ್ನು ಕಷ್ಟಪಟ್ಟು ಶ್ರಮಪಟ್ಟು ಸಾಧಿಸಬೇಕು.  ಕೈ ಕೆಸರಾದರೆ ಮಾತ್ರ ಬಾಯಿ ಮೊಸರು.  

ನೆನಪಿರಲಿ ನರೇಂದ್ರ ಮೋದಿ ಇಲ್ಲದೆಯೇ ೨೦೧೪ ಇಸವಿಯ ತನಕ ದೇಶ ನಡೆದಿತ್ತು, ಈಗಲೂ ಅವರಿಲ್ಲದೆ ದೇಶ-ಕಾಲ ಎಲ್ಲವೂ ನಡೆಯುತ್ತದೆ.  ವಿಶ್ವಗುರುವೆಂದು ಕರೆಯಿಸಿಕೊಳ್ಳುವುದರ ಆತುರದೊಳಗೆ ಇತರೆ ಧರ್ಮ, ಜಾತಿ, ಸಂಸ್ಕೃತಿ ಎಲ್ಲದಕ್ಕೂ ಸಮವಾಗಿ ಆದರ ಮಾಡುವುದನ್ನು ಮರೆತಿದ್ದಾರೆ ಎಂದು ಅನ್ನಿಸುತ್ತಿದೆ. 

ಹೀಗಿರುವಾಗ ಒಬ್ಬ ದೇಶವನ್ನು ನಡೆಸುವವನು ಮೇಲೆ ತಿಳಿಸಿದ   ಸೃಜನಶೀಲ ಕೆಲಸಗಳಲ್ಲಿ ಸಾಧನೆ ಮಾಡಿ ತೋರಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ, ಅವರಿಗೆ ಬಹುಮಾನಗಳನ್ನು ವಿತರಿಸಿ , ವಿತರಿಸುವ ನೆಪದಲ್ಲಿ ಚಿತ್ರ ತೆಗೆಸಿಕೊಂಡು ದೇಶಕ್ಕೆ ತನ್ನ ಔದಾರ್ಯವನ್ನು ಭಿತ್ತಿ ಚಿತ್ರಗಳ ಮೂಲಕ ಮುಗ್ಧ ಜನರಿಗೆ ತೋರಿಸಿ ಬಿಟ್ಟರೆ ತಾನು ದೊಡ್ಡವನಾದಂತೆಯೇ?  ಇದನ್ನು ಯಾರು ಮೆಚ್ಚುತ್ತಾರೆ ? ಅವನನ್ನು ಶಿವನ ಅವತಾರವೆಂದು ಹೇಳಬಹುದೇ ? ಶಿವನನ್ನು ಕಂಡವರು ಹೇಳಬೇಕು, ಅಲ್ಲವೇ?