ಮನುಷ್ಯ ತಾನು ಬೆಳೆಯುವಾಗ ಆದ ಅನುಭವ, ತನ್ನ ಪರಿಸರ, ಕಾಲ ಘಟ್ಟ, ಅನುಕೂಲತೆ, ಕಷ್ಟ-ನಷ್ಟ ಇದೆಲ್ಲವೂ ವಿಭಿನ್ನವಾಗಿರುತ್ತದೆ. ಎಲ್ಲರ ಮನೆಯಲ್ಲಿಯೂ ಪ್ರತ್ಯೇಕವಾದ ವಾತಾವರಣವಿರುತ್ತದೆ ಅಲ್ಲವೇ ?
ಕೆಲವು ಕುಟುಂಬದಲ್ಲಿ ಹಣಮಾಡುವು ಮತ್ತು ಅದರ ವಿಷಯಗಳಿಗೆ ಮಾತ್ರ ಪ್ರಧಾನತೆ ಕೊಡಲಾಗುತ್ತದೆ. ಕೆಲವು ಮನೆಗಳಲ್ಲಿ ಸಂಗೀತ, ಸಾಹಿತ್ಯ, ನೃತ್ಯ – ಗಾಯನ ಈ ವಿಷಯದಲ್ಲಿ ಸದಾ ತಲ್ಲೀನರಾಗಿರುತ್ತಾರೆ. ರುಚಿ, ಶುಚಿ, ಆಚಾರ ಒಂದು ಮನೆಯಲ್ಲಾದರೆ ಇನ್ನೊಂದು ಮನೆಯಲ್ಲಿ ವ್ಯಾಪಾರವೇ ಮುಖ್ಯವಾಗಿರುತ್ತದೆ. ಕೆಲವು ಕುಟುಂಬದಲ್ಲಿ ಆಧ್ಯಾತ್ಮ ಮೂಲದಲ್ಲಿ ನಿಂತು ಅದರ ಸುತ್ತ ಮನೆಯ ಮಂದಿ ಹೆಣೆದುಕೊಂಡಿರುತ್ತಾರೆ. ಪೂಜೆ ಪುನಸ್ಕಾರಗಳೇ ಪರಮಕಾರ್ಯ ಎಂದು ನಂಬಿದ ಕುಟುಂಬಗಳು ಅದೆಷ್ಟಿದೆಯೋ? ಕೆಲವೊಂದು ಮನೆತನದಲ್ಲಿ ರಾಜಕೀಯ / ರಾಜಸತ್ತತೆ ಬಹಳ ಮನೆಮಾಡಿರುತ್ತದೆ. ರಾಜಕೀಯ ಹಾಗು ಅಧಿಕಾರ ತಲತಲಾಂತರದಿಂದ ಕೂಡಿಕೊಂಡು ರಕ್ತದಲ್ಲಿ ಸೇರಿರುತ್ತದೆ.
ಈ ಮೇಲಿನ ಹಿನ್ನೆಲೆಗಳನ್ನು ನೋಡಿದಾಗ ಒಂದು ಮಗು ತನ್ನ ಪರಿಸರಕ್ಕೆ ಅನುಗುಣವಾಗಿ ಮೂಲ ಯೋಚನೆಗಳನ್ನು ಆಗಾಗ ತನ್ನ ಪ್ರಸಕ್ತ ಸಂಧರ್ಭಕ್ಕೆ ಹೊಂದಿಸಿಕೊಳ್ಳುತ್ತ ಬೆಳೆದಿರುತ್ತಾನೆ ಅಥವಾ ಬೆಳೆದಿರುತ್ತಾಳೆ. ಇದೊಂದೇ ನಿಜವಲ್ಲ, ಒಮ್ಮೊಮ್ಮೆ ತನ್ನ ಮೂಲ ಸಂಸ್ಕಾರದ ಬಲದಿಂದ ಬಂಡಾಯವೆದ್ದು ತನ್ನ ಆಲೋಚನೆಗಳೊಂದಿಗೆ ಸ್ಪಂದಿಸುತ್ತಾ ತನ್ನನ್ನು ತಾನೇ ಪ್ರಶ್ನಿಸುತ್ತಾ ಬೆಳೆದಿರುತ್ತಾನೆ ಅಥವಾ ಬೆಳೆದಿರುತ್ತಾಳೆ. ಎಲ್ಲ ತಂದೆ-ತಾಯಿಯರಿಗೆ ತನ್ನ ಮಗ / ಮಗಳು ತಾನು ತಿಳಿದ, ನಡೆದ ಹಾದಿಯಲ್ಲಿ ಅಥವಾ ಅದಕ್ಕಿಂತ ಉತ್ತಮವಾದ ಕ್ಷೇತ್ರದಲ್ಲಿ ಬೆಳೆದು ದೊಡ್ಡವರಾಗಬೇಕು ಎಂಬುದು ಸರ್ವೆಸಹಜ. ಈಗಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮೊಬೈಲ್ ಫೋನ್, ಟಿವಿ ರೇಡಿಯೋ ಹೀಗೆ ಹತ್ತು ಹಲವು ಮಾಧ್ಯಮಗಳ ಸಂಪರ್ಕ ಇರುವಾಗ ಇದರಿಂದ ಬಹಳ ಬೇಗ ಪ್ರಭಾವಿತರಾಗುತ್ತಿದ್ದಾರೆ ಎನ್ನುವುದು ಈಗ ಹಳೆಯ ವಿಷಯವಾಗಿದೆ.
ಹೀಗಿರುವಾಗ ಬಹಳ ಎಳೆಯ ವಯಸ್ಸಿನಲ್ಲಿ ಮಕ್ಕಳು ಪರಿವರ್ತಿತರಾಗುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಕಡಿವಾಣವಿಲ್ಲದ ಮಾಧ್ಯಮಗಳ ದೃಶ್ಯ, ಭಾಷೆ, ವಿಚಾರ, ನಂಬಿಕೆ, ವಿಷಯ ವಸ್ತುಗಳು ಎಲ್ಲವೂ ಮಕ್ಕಳ ಸ್ವತಂತ್ರ ಆಲೋಚನೆಗಳನ್ನು ಮೀಟುತ್ತಿರುತ್ತದೆ ಎಂದರೆ ತಪ್ಪಾಗಲಾರದು. ತಂದೆ-ತಾಯಿ ನಂಬಿದ ದೇವರು, ನಡೆದ ಹಾದಿ, ನೋಡಿದ ಪ್ರಪಂಚ, ಆಡಿದ ಮಾತುಗಳು, ಹೇಳಿದ ಪಾಠ, ಕೇಳಿದ ವಿಷಯಗಳು, ತಿಂದ ಆಹಾರ, ಕುಡಿದ ಪಾನೀಯ, ಪ್ರಯಾಣ ಮಾಡಿದ ವಾಹನ, ಚಲಿಸಿದ ರಸ್ತೆ, ಉಟ್ಟ ಉಡುಗೆ ಎಲ್ಲವು ಭಿನ್ನವಾಗಿರುತ್ತದೆ. ಎಷ್ಟೋ ಮಕ್ಕಳಿಗೆ ತನ್ನ ತಂದೆ-ತಾಯಿ ಕಂಡ ಪ್ರಪಂಚ ಬೇಡವಾಗಿರುತ್ತದೆ ಅಥವಾ ತಿಳಿದೇಇರುವುದಿಲ್ಲ !. ಇದು ಯಾರ ತಪ್ಪುಗಳೂ ಅಲ್ಲ. ತಂದೆ ತಾಯಿ ಕಂಡ ಹಿಂದೂ ಧರ್ಮದ ಆಧಾರವೇ ಬೇರೆ, ಈಗ ಮಕ್ಕಳು ನೋಡುತ್ತಿರುವ ಹಿಂದುತ್ವವೇ ಬೇರೆ.
ಹೀಗಿರುವಾಗ ಯಾವುದು ತಪ್ಪು ಯಾವುದು ಸರಿ ಎಂದು ಹೇಗೆ ಹೇಳುವುದು ? .. ನಾವು ಏನನ್ನು ಬೇರೆಯವರ ಮೇಲೆ ಹೇರುತ್ತೇವೋ ಅದು ಅವರಿಗೆ ಒಪ್ಪಬೇಕು ಎಂದು ಎಲ್ಲೂ ನಿಮಯ ಇಲ್ಲ, ಮಕ್ಕಳಿರಬಹುದು ಇತರರಿರಬಹುದು.
ವಿವೇಕಾನಂದರು ರಾಮಕೃಷ್ಣರಿಂದ ಪ್ರಭಾವಗೊಂಡಿದ್ದರು, ಅರ್ಜುನ ಶ್ರೀ ಕೃಷ್ಣನಿಂದ ಪ್ರಭಾವಗೊಂಡಿದ್ದರು, ಮಹತ್ಮಾ ಗಾಂಧಿಯು ಬ್ರಿಟೀಷರ ದಬ್ಬಾಳಿಕೆಯಿಂದ ಬಂಡಾಯ ಎದ್ದಿದ್ದರು, ಯೇಸುವು / ಬಸವಣ್ಣನವರು ಪುರೋಹಿತಶಾಹಿ ವರ್ಗಗಳಿಂದನಡೆದ ಅನ್ಯಾಯ-ಅಪಮಾನಗಳನ್ನು ವಿರೋಧಿಸುವ ಸತ್ಯದಿಂದ ಪ್ರೇರಣೆ ಹೊಂದಿದ್ದರು, ಒಟ್ಟಿನಮೇಲೆ ಎಲ್ಲ ಮಹಾನುಭಾವರೂ ತಮ್ಮ-ತಮ್ಮ ಪ್ರಪಂಚದ ಕಾಲದಲ್ಲಿ ನಡೆದ ರಾಜಕೀಯ / ಆಡಳಿತ / ಜೀವನ / ಸುಧಾರಣೆ / ಲೋಪ-ದೋಷಗಳ ವಿಧ್ಯಮಾನಗಳ ಸುತ್ತಮುತ್ತ ಹೆಣೆದುಕೊಂಡಿರುವ ಪ್ರೇರಣೆಯೇ ಆಗಿವೆ, ಅಲ್ಲವೇ ?
ಒಟ್ಟಿನಲ್ಲಿ ಅಪ್ಪ ನಂಬಿದ ದೇವರನ್ನು ಮಗ/ಮಗಳು ನಂಬಬೇಕು ಎನ್ನುವುದು ದೂರದ ಮಾತು.