ಸಮಾಜದಲ್ಲಿ ಬದುಕಬಹುದಾದ / ಇರಬಹುದಾದ ಒಂದು ಕುಟುಂಬವನ್ನು ತೆಗೆದುಕೊಳ್ಳೋಣ, ನಾಲ್ಕು ಮಂದಿಯ ಕುಟುಂಬ ಸದಸ್ಯರಿಂದ ಕೂಡಿದ ಕುಟುಂಬವೆಂದುಕೊಳ್ಳಿ. ಅಪ್ಪ-ಅಮ್ಮ, ಇಬ್ಬರು ಮಕ್ಕಳು. ಅಪ್ಪ (ಸುಧಾಕರ) ಪಾಠಹೇಳುವ ಜ್ಞಾನವಂತ ಶಿಕ್ಷಕ, ಅಮ್ಮ (ವಿಮಲ) ಒಂದು ಫ್ಯಾಕ್ಟರಿಯಲ್ಲಿ ಕೆಲಸಮಾಡುತ್ತಿರುವ ಸ್ವಲ್ಪ ಜಾಸ್ತಿ ಮಾತನಾಡುವ ಬುದ್ದಿವಂತ ಅಧಿಕಾರಿ, ದೊಡ್ಡ ಮಗಳು (ಕಾವೇರಿ) ಸುಂದರ ಹಾಗು ಮಧುರವಾಗಿ-ಇಂಪಾಗಿ ಹಾಡುವಂತಹ ಹರೆಯದ ಹುಡುಗಿ, ಚಿಕ್ಕ ಮಗ (ಶ್ರೀಧರ) ತುಸು ಬುದ್ದಿ ಇಲ್ಲದ / ಕಡಿಮೆ ವಿಚಾರ ಮಾಡುವ ಸ್ವಲ್ಪ ತೊದಲಿಸಿ ಮಾತಾಡುವ ಒರಟು ಸ್ವಭಾವದ ಹರೆಯದ ಹುಡುಗ. ಇವರೊಟ್ಟಿಗೆ ಐದನೆಯ ಮನೆಯ ಸದಸ್ಯನಾಗಿ ಒಂದು (ಕಾಳ ಎಂಬ ಹೆಸರಿನ) ಸಾಕು ನಾಯಿ.
ಈ ಕುಟುಂಬವನ್ನು ಹೇಗೆ ಕರೆದರೆ ಸರಿಯಾದೀತು? ಹೇಗೆ ಈ ಕುಟುಂಬವನ್ನು ಸಂಬೋಧಿಸಲಿ?
- ಜ್ಞಾವಂತ ಅಪ್ಪನ ಸಂಸಾರ ? ಅಥವಾ ಕುಂಟು ಮೇಸ್ಟ್ರು ಮನೆಯವರು ?
- ಬುದ್ಧಿವಂತ ಅಮ್ಮ ಇರುವ ಕುಟುಂಬ ? ಅಥವಾ ಬಾಯಿ-ಬಡುಕಿ ಫ್ಯಾಕ್ಟರಿ ಮೇಡಂ ಸಂಸಾರ ?
- ಮಧುರ ಮನೋಹರ ಸಂಗೀತದ ಕುಟುಂಬ ? ಅಥವಾ ಸಿಂಗರ್ ಫ್ಯಾಮಿಲಿ?
- ಒರಟನ ಮನೆಯವರು ? ಅಥವಾ ತೊದಲನ ಮನೆಯವರು ?
ಅಥವಾ ಹೀಗೆ ನುಡಿದರೆ
- ಆ ಬ್ರಾಹ್ಮಣನ ಮನೆಯವರು ? / ಲಿಂಗಾಯತನ ಮನೆಯವರು ? / ಹೊಲೆಯನ ಮನೆಯವರು ? / ಶೆಟ್ಟಿಯ ಮನೆಯವರು ?
ಅಥವಾ ಹೀಗಿ ಹೇಳಿ ಕರೆದರೆ ? ಸ್ವಲ್ಪ ಸಮಾಧಾನ ತರುವುದಲ್ಲವೇ? ನಯವಾಗಿ ಸಂಭೋದಿಸುತ್ತಿದ್ದೇವೆ ಎಂದು ನಿಮಗೆ ಅನ್ನಿಸುವುದಿಲ್ಲವೇ ?
- ಸುಧಾರಕ ಮೇಸ್ಟ್ರು ಮನೆಯವರು ? ಅಥವಾ
- ವಿಮಲಾ ಆಂಟಿ ಮನೆಯವರು ಅಥವಾ
- ಕಾವೇರಿ ಮನೆಯವರು ? ಅಥವಾ
- ಶ್ರೀಧರನ ಮನೆಯವರು ?
ಒಬ್ಬ ವ್ಯಕ್ತಿಯನ್ನಾಗಲಿ, ಒಂದು ಕುಟುಂಬವನ್ನಾಗಲಿ, ಒಂದು ಸಮಾಜವನ್ನಾಗಲಿ, ಒಂದು ರಾಜ್ಯ ಅಥವಾ ಒಂದು ದೇಶವನ್ನಾಗಲಿ ಸಂಬೋಧಿಸುವಾಗ ಸರಿಯಾದ ಗುಣ ವಿಶೇಶಣಗಳನ್ನು ಬಳಸುವು ಬಹಳ ಮುಖ್ಯ. ಕಳ್ಳರ ಸಂಸಾರ, ದುಷ್ಟರ ರಾಷ್ಟ್ರ ಎಂದು ಹೇಳುವಾಗ ವಿವೇಚನೆ ಮಾಡಿ ಆಲೋಚಿಸಿ ಸಂಬೋಧಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಜಾತಿಯನ್ನೋ ಮತವನ್ನೋ ಒಂದು ರಾಷ್ಟ್ರಕ್ಕೆ ಸೇರಿಸುವುದು ಎಷ್ಟು ಸರಿ ?
ಕುಟುಂಬದಲ್ಲಿ ಒಬ್ಬರಂತೆ ಇನ್ನೊಬ್ಬರು ಇರಲು, ಸಮನಾಗಿ ಆಲೋಚಿಸಲು, ಒಂದೇ ರೀತಿಯಾಗಿ ನಡೆದುಕೊಳ್ಳಲು ಸಾಧ್ಯವ್ಲಿಲ!, ಹಾಗೆಯೇ ಒಂದು ಸಮಾಜ ಒಂದೇ ಆಲೋಚನೆಯೊಂದಿಗೆ ಅಸ್ತಿತ್ವದಲ್ಲಿ ಇರಲು ಕಷ್ಟ ಸಾಧ್ಯ !. ಭಿನ್ನತೆ ವಿಭಿನ್ನತೆ ನಮ್ಮ ಸಂಸಾರದ ಹಾಗು ಜೀವನದ ಅಂಗ, ವಿಭಿನ್ನತೆಯಲ್ಲಿ ಬದುಕುವುದೇ ಧರ್ಮದ ನಿಯಮ ಎಂದು ತಿಳಿದವರು ಹೇಳಿದ್ದಾರೆ. ನಂಬಿಕೆಗಳು ಹಲವು, ಚಿಂತನೆಯ ಮೂಲ ಹಲವು, ಜೀವನದ ವಿಧಾನಗಳು ಹಲವು, ಮಾತು, ಭಾಷೆ, ನಡವಳಿಕೆ, ನೋಟ, ಗ್ರಹಿಕೆ, ಬದುಕುವ ದಾರಿ, ಅಪೇಕ್ಷೆ ಎಲ್ಲವು ಬೇರೆ ಬೇರೆ !. ಸಮಾನವಲ್ಲದ ಅಸಮಾನ ! ಈ ಅಸಮಾನತೆಯಲ್ಲೇ ಒಂದು ರಾಜ್ಯ ಅಥವಾ ರಾಷ್ಟ್ರ ನಿರ್ಮಾಣವಾಗುವುದು ಅಲ್ಲವೇ ? ರಾಷ್ಟ್ರಗಳಿಗೆ ಜಾತಿಯ ಹಾಗು ಮತದ ಕೋಟೆಗಳನ್ನು ಕಟ್ಟುವುದು ಬಹಳ ಅಪಾಯಕಾರವಾದ ಬೆಳವಣಿಗೆ. ಈಗಾಗಲೇ ನಾವು ಜಾತಿ-ಮತಗಳ ತಂತಿಬೇಲಿಗಳನ್ನು ನಿಲ್ಲಿಸಿದ್ದೇವೆ. ವ್ಯಾಪಾರ, ವಿಚಾರ-ವಿನಿಮಯ, ವ್ಯವಹಾರ ಎಲ್ಲವೂ ಈ ತಂತಿ ಬೇಲಿಗಳನ್ನು ಸವರಿಕೊಂಡು ತರಚು ಗಾಯಗಳಿಂದ ರಕ್ತ ಸೋರಿಸಿಕೊಂಡು ಕುಂಟುತ್ತಾ ನಡೆಯುತ್ತಿವೆ. ದಿನನಿತ್ಯದ ರಾಜ್ಯವ್ಯಾಪಿ, ರಾಷ್ಟ್ರವ್ಯಾಪಿ ಜಗಳಗಳೇ ಇದಕ್ಕೆ ಸಾಕ್ಷಿ ಅಲ್ಲವೇ ?
ಇದೆಲ್ಲವನ್ನು ತಿಳಿದೂ ನಾವು ಒಂದು ರಾಷ್ಟ್ರವನ್ನು ಮತಗಳ ಆಧಾರದ ಮೇಲೆ ಕರೆಯಲು ಶುರುಮಾಡಿದ್ದೇವೆ. ಹಿಂದೂ ರಾಷ್ಟ್ರ, ಮುಸಲ್ಮಾನ ರಾಷ್ಟ್ರ, ಕ್ರಿಶ್ಚಿಯನ್ ರಾಷ್ಟ್ರಗಳು ಹಾಗು ಬೌದ್ಧ ರಾಷ್ಟ್ರ ಎಂದು. ಪಶ್ಚಿಮದವರು ಮಾಡಿದ್ದಾರೆ ಎಂದು ಪೂರ್ವದವರೂ ಮಾಡುತ್ತಿದ್ದಾರೆ. ರಾಜಕೀಯವನ್ನು ಚೆನ್ನಾಗಿ ತಿಳಿದಿರುವ ಮಂದಿ ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ ಅಲ್ಲವೇ?